ಅಬೆವಿಲಿಯನ್
	
ಹಳೆಯ ಶಿಲಾಯುಗದ ಪ್ರಾರಂಭಕಾಲದಲ್ಲಿ ರೂಢಿಯಲ್ಲಿದ್ದ ಶಿಲಾಯುಧ ಉದ್ಯಮ ಅಂದರೆ ಶಿಲಾಯುಧವನ್ನು ಮಾಡುತ್ತಿದ್ದ ರೀತಿ. ಈ ಉದ್ಯಮ ಫ್ರಾನ್ಸಿನ ಅಬೆವಿಲ್ ಊರಿನ ಬಳಿ ಮೊದಲು ಗುರುತಿಸಲ್ಪಟ್ಟಿದ್ದರಿಂದ ಈ ಹೆಸರು ರೂಢಿಗೆ ಬಂದಿದೆ. ಒಂದು ಕಡೆ ಚೂಪಾಗಿ ಇನ್ನೊಂದು ಕಡೆ ದಪ್ಪಗೆ ಮೊಂಡಾಗಿ ಇರುವ ಒರಟು ಕೈಕೊಡಲಿಗಳು ಈ ಕಾಲದ ವೈಶಿಷ್ಟ್ಯ. ಇವನ್ನು ಮಾಡಲು ಎರಡೂ ಭಾಗದಿಂದ ಕಲ್ಲಿನಿಂದ ಹೊಡೆದು ಆಳವಾಗಿ ಚಕ್ಕೆಗಳನ್ನು ಎಬ್ಬಿಸಿರುತ್ತಾರಾದ್ದರಿಂದ ಇದರ ಪಕ್ಕಗಳು ಅಂಕುಡೊಂಕಾಗಿರುತ್ತವೆ. ಈ ಆಯುಧವನ್ನು ಮಾಡಲು ಯೂರೋಪಿನಲ್ಲಿ ಚಮುಕಿಕಲ್ಲೂ ಮತ್ತು ಆಫ್ರಿಕ ಹಾಗೂ ಏಷ್ಯಗಳಲ್ಲಿ ಕ್ವಾರ್ಟ್‍ಜೈಟ್ ಎಂಬ ಕಲ್ಲೂ ಉಪಯೋಗಿಸಲ್ಪಡುತ್ತಿದ್ದುವು. ಕೈಕೊಡಲಿಗಳನ್ನು ಕೆತ್ತುವುದು, ಒರೆಯುವುದು, ಜಜ್ಜುವುದು ಮುಂತಾದ ಎಲ್ಲ ತರದ ಕಾರ್ಯಗಳಿಗೂ ಉಪಯೋಗಿಸುತ್ತಿದ್ದರೆಂದು ಕಾಣುತ್ತದೆ. ಇದು ಕಲ್ಲುಗಟ್ಟಿಯ ಆಯುಧ. ಕಲ್ಲುಗಟ್ಟಿಯಿಂದ ಅನೇಕ ಚಕ್ಕೆಗಳನ್ನು ಎಬ್ಬಿ ಎರಡು ಪಕ್ಕಗಳಲ್ಲಿಯೂ ಓರೆಕೋರೆಯ ಕತ್ತರಿಸುವ ಬಾಯಿಗಳು ಉಂಟಾಗುವಂತೆ ಮಾಡುತ್ತಿದ್ದರು. ಇದೇ ಅಬೆವಿಲಿಯನ್ ಉದ್ಯಮದ ಹೆಗ್ಗುರುತು.

	ಈ ಬಗೆಯ ಆಯುಧಗಳು ಯೂರೋಪು, ಪಶ್ಚಿಮ ಏಷ್ಯ, ಭಾರತ ಮತ್ತು ಆಫ್ರಿಕಗಳಲ್ಲಿ ದೊರೆತಿವೆ. ಈ ಉದ್ಯಮ ಮಧ್ಯ ಆಫ್ರಿಕದಲ್ಲಿ ಪ್ಲೀಸ್ಟೋಸೀಸೀನೀನ ಎರಡನೆಯ ಹಿಮಯುಗದ ವೇಳೆಗೆ, ಅಂದರೆ ಸುಮಾರು 4,00,000 ವರ್ಷಗಳ ಹಿಂದೆ ರೂಪುಗೊಂಡು ಮುಂದಿನ ಉಷ್ಣಕಾಲದಲ್ಲಿ ಇತರ ಪ್ರದೇಶಗಳಿಗೆ ಹರಡಿರಬಹುದಾಗಿ ಕಾಣುತ್ತದೆ. ಆಫ್ರಿಕದಲ್ಲಿ ಕೆನ್ಯ ರಾಜ್ಯದ ಓಲ್ದವ್ವೆ ಎಂಬಲ್ಲಿ ನಡೆಸಿರುವ ಇತ್ತೀಚಿನ ಪರಿಶೀಲನೆಗಳಿಂದ ಈ ಉದ್ಯಮ ಇದಕ್ಕೂ ಹಳೆಯದಾದ ಬಹಳ ಸಾಮಾನ್ಯ ತರದ ಓಲ್ದೋವನ್ ಶಿಲಾಉದ್ಯಮದಿಂದ ಉಗಮ ಹೊಂದಿದಂತೆ ತಿಳಿದುಬಂದಿದೆ. ಮುಂದೆ ಬಹುಕಾಲದವರೆಗೆ ರೂಢಿಯಲ್ಲಿದ್ದ ಅಷೂಲಿಯನ್ ಉದ್ಯಮಕ್ಕೆ ಅಬೆವಿಲಿಯನ್ನೇ ಮೂಲ.									
(ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ